Department of Kannada
ಕನ್ನಡ ವಿಭಾಗದ ಮುಖ್ಯಸ್ಥರ ಸಂದೇಶ
"ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈ ಮರೆಯುವುದು - ರಾಷ್ಟ್ರಕವಿ ಕುವೆಂಪು"
Dr. Poornima S
MA, Phd, NET
ವಿಶ್ವದಲ್ಲೇ ಅತ್ಯಂತ ವೈಜ್ಞಾನಿಕ, ವಿಶ್ಲೇಷಣಾತ್ಮಕ ಮತ್ತು ವೈಶಿಷ್ಟ್ಯ ಪೂರ್ಣ ಸ್ವಂತ ಲಿಪಿಯನ್ನು ಕನ್ನಡ ಭಾಷೆ ಹೊಂದಿದೆ. ನಮ್ಮ ಕನ್ನಡ ವರ್ಣಮಾಲೆಯಲ್ಲಿನ ಪ್ರತಿಯೊಂದು ವರ್ಣವು ಯಾವ ಅಂಗದ ಸಹಾಯದಿಂದ ಎಲ್ಲೆಲ್ಲಿ ಉಚ್ಚರಿಸಲ್ಪಡುತ್ತದೆ ಎಂಬ ಶೇಕಡ ತೊಂಬತ್ತೊಂಬತ್ತು ವೈಜ್ಞಾನಿಕ ತಾರ್ಕಿಕ ಅಂಶವನ್ನು ಕನ್ನಡ ವರ್ಣಮಾಲೆ ಒಳಗೊಂಡಿರುವುದರಿಂದಲೇ ಆಚಾರ್ಯ ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು "ಲಿಪಿಗಳ ರಾಣಿ" ಎಂದು ಕರೆದಿದ್ದಾರೆ. ಸಂವಿಧಾನದ ಪ್ರಕಾರ ಭಾರತೀಯ ಇಪ್ಪತ್ತೆರಡು ಭಾಷೆಗಳಲ್ಲಿ ಹಿಂದಿಯನ್ನು ಬಿಟ್ಟರೆ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ಕನ್ನಡ ಭಾಷೆ ಮಾತ್ರ. ಇಂಥ ಸಂಪತ್ಭರಿತ ಕನ್ನಡ ಭಾಷೆಯ ವಾರಸುದಾರರಾದ ಕನ್ನಡಿಗರು ತಮ್ಮ ದಿನನಿತ್ಯದ ಭಾಷಾ ಬಳಕೆಯಲ್ಲಿ ಕನ್ನಡವನ್ನು ಬಳಸದಿದ್ದರೆ ನಶಿಸಿಹೋಗುತ್ತದೆ. ಸಾಧ್ಯವಾದಷ್ಟು ಶುದ್ಧ ಕನ್ನಡವನ್ನು ಬಳಸುವ ಪ್ರಯತ್ನವನ್ನು ಮಾಡಬೇಕು. ಅನಿವಾರ್ಯ, ಅವಶ್ಯಕವಲ್ಲದಿದ್ದರೆ ಕನ್ನಡಿಗರು ಕನ್ನಡೇತರ ಭಾಷೆಯನ್ನು ಬಳಸಬಾರದು. ಭಾಷೆಯನ್ನು ಬಳಸುವ ಬೆಳೆಸುವ ಜವಾಬ್ದಾರಿ ಕರ್ನಾಟಕದಲ್ಲಿರುವ ಪ್ರತಿಯೊಬ್ಬರ ಕರ್ತವ್ಯ.
"ನಿನ್ನ ದಾರಿಗೆ ನಿನ್ನ ಬೆಳಕನ್ನೇ ಒಯ್ಯಿ"
ಎಂಬ ಎಂ.ಗೋಪಾಲಕೃಷ್ಣ ಅಡಿಗರ ಮಾತಿನಂತೆ ವಿದ್ಯಾರ್ಥಿಗಳು ತಮ್ಮ ಸ್ವಂತ ಶಕ್ತಿ, ಸಾಮರ್ಥ್ಯ, ವಿವೇಕಗಳ ಬೆಳಕಿನಲ್ಲಿ ಮಾತ್ರ ಜೀವನವನ್ನು ರೂಪಿಸಿಕೊಂಡು ಯಾವುದೇ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಯಾರ ಮೇಲೂ ಅವಲಂಬನೆ ಆಗದೆ ಸತ್ಯ ಸ್ವಾವಲಂಬನೆಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ಸಾಧ್ಯವಾದರೆ ಮತ್ತೊಬ್ಬರ ಬಾಳಿಗೆ ಬೆಳಕಾಗುಂತೆ ವಿದ್ಯಾರ್ಥಿಗಳಲ್ಲಿ ಸಶಕ್ತತೆಯನ್ನು ಬೆಳೆಸುವುದೇ ಕನ್ನಡ ವಿಭಾಗದ ಮುಖ್ಯಸ್ಥರ ಉದ್ದೇಶವಾಗಿದೆ.
ಕನ್ನಡ ವಿಭಾಗದ ಸಂದೇಶ
ಎಸ್ಐಸಿಎಂ ಕಾಲೇಜಿನ ಕನ್ನಡ ವಿಭಾಗವು ಬೆಂಗಳೂರು ನಗರ ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕನುಗುಣವಾಗಿ 'ಬಿ.ಬಿ.ಎಂ' ಮತ್ತು 'ಬಿ.ಕಾಂ' ಕೋರ್ಸುಗಳ ಶಿಕ್ಷಣವನ್ನು ಒದಗಿಸುತ್ತದೆ. ರಾಷ್ಟ್ರೀಯ ಮೌಲ್ಯಾಂಕ ಮಾನ್ಯತಾ ಪರಿಷತ್ತಿನ 'ಬಿ' ಶ್ರೇಣಿಯನ್ನು ಕಾಲೇಜು ಪಡೆದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಾಲಿಸುತ್ತಿದೆ. ಪ್ರಾಚೀನ, ಮಧ್ಯಕಾಲೀನ, ಆಧುನಿಕ ಸಾಹಿತ್ಯ ಚರಿತ್ರೆಗಳಿಗನುಗುಣವಾಗಿ ನಾಡು-ನುಡಿ ಸಂಸ್ಕೃತಿಗಳಿಗೆ ಪೂರಕವಾದ ವಸ್ತುವನ್ನಿಟ್ಟುಕೊಂಡು ವಿಶ್ಲೇಷಣಾತ್ಮಕ ಮತ್ತು ತಾಂತ್ರಿಕ ಬೋಧನೆಯನ್ನು ನೀಡಲಾಗುತ್ತಿದೆ.
ಪ್ರತಿವರ್ಷ 'ಎರೋಡೈಟ್' ಎಂಬ ಹೆಸರಿನಲ್ಲಿ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಹಾಗೂ 'ಸಂಸೃಸ್ಠಿ' ಹೆಸರಿನಲ್ಲಿ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಗಳನ್ನು ಆಯೋಜಿಸುತ್ತೇವೆ. ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಐ.ಎಸ್.ಬಿ.ಎನ್ ಪುಸ್ತಕದಲ್ಲಿ ಪ್ರಕಟಿಸುತ್ತೇವೆ. 'ಅಪರಂಜಿ ಕನ್ನಡ ಪರಿಷತ್ತು' ಮೂಲಕ ವಿದ್ಯಾರ್ಥಿಗಳ ಲಿಖಿತ ಕೌಶಲ್ಯ ಅಭಿವೃದ್ಧಿಗಾಗಿ ಕಟ್ಟುಕಥೆ, ಪ್ರಬಂಧ ಮಂಡನೆ, ಕಥಾ ವಿಸ್ತರಣೆ, ವಿಮರ್ಶೆ, ವಿಶ್ಲೇಷಣೆ ಮೊದಲಾದ ಸ್ಪರ್ಧೆಗಳನ್ನು ಹಾಗೆಯೇ ವಿದ್ಯಾರ್ಥಿಗಳ ಮೌಖಿಕ ಕೌಶಲ್ಯ ಅಭಿವೃದ್ಧಿಗಾಗಿ ಕಾರ್ಯಕ್ರಮ ಸ್ಪರ್ಧೆ, ಸುದ್ದಿ ವಾಚನ ಸ್ಪರ್ಧೆ, ಭಾಷಣ ಸ್ಪರ್ಧೆ, ಇತ್ಯಾದಿಗಳನ್ನು ನಿರಂತರವಾಗಿ ಆಯೋಜಿಸುತ್ತೇವೆ.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಿವೃದ್ಧಿಗಾಗಿ ಪ್ರತಿವರ್ಷ ಕಾವ್ಯ ಸಂಸ್ಕೃತಿ ಶಿಬಿರಗಳಿಗೆ, ಅಂತರ್ ಕಾಲೇಜು ಸ್ಪರ್ಧೆಗಳಿಗೆ ಸದಾ ಪ್ರೋತ್ಸಾಹಿಸಿ ನಿಯೋಜಿಸುತ್ತೇವೆ. ಭಾಷಾಸಂಗಮದ ವತಿಯಿಂದ ಪ್ರಕಟಿಸುವ 'ಭಾಷಾಭಿವ್ಯಕ್ತಿ' ಎಂಬ ಷಾಣ್ಮಾಸಿಕ ವಾರ್ತಾಪತ್ರಿಕೆ ಮತ್ತು ಕಾಲೇಜಿನ ವಾರ್ಷಿಕ ಸಂಚಿಕೆಗಳಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಲೇಖನಗಳನ್ನು ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ ಹಾಗೂ ಸ್ಪರ್ಧಾತ್ಮಕ ಯುಗಕ್ಕನುಗುಣವಾದ ಕನ್ನಡದ ಎಲ್ಲಾ ಅತ್ಯುತ್ತಮ ಪುಸ್ತಕಗಳು ನಮ್ಮ ಗ್ರಂಥಾಲಯದಲ್ಲಿದೆ. ಒಟ್ಟಾರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕನ್ನಡ ವಿಭಾಗವು ತೊಡಗಿಸಿಕೊಂಡಿದೆ.